ವಿಜಯವಾಣಿ

506k Followers

ಆಡಳಿತ ಸುಧಾರಣೆಗೆ ಸರ್ಕಾರ ಹೆಜ್ಜೆ: ಕಂದಾಯ ಇಲಾಖೆ ಶಿಫಾರಸು ಜಾರಿ, ಅನುಪಾಲನಾ ವರದಿ ಸಲ್ಲಿಕೆಗೆ ಸೂಚನೆ

30 Nov 2021.01:20 AM

ಬೆಂಗಳೂರು: ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ನಿಗದಿಪಡಿಸಿರುವ 25 ರೂ. ಶುಲ್ಕವನ್ನು 50 ರೂ.ಗೆ ಹೆಚ್ಚಿಸಬೇಕು. ಬೆಂಗಳೂರು ಒನ್ ರೀತಿ ಗ್ರಾಮ ಒನ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸೇರಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಮೊದಲ ವರದಿ ಕುರಿತು ಕಂದಾಯ ಇಲಾಖೆ ಶಿಫಾರಸುಗಳನ್ನು ಅನುಷ್ಠಾನಗೊಳಿಸಿ ಅನುಪಾಲನಾ ವರದಿ ಸಲ್ಲಿಸುವಂತೆ ಸರ್ಕಾರ ಅನಧಿಕೃತ ಟಿಪ್ಪಣಿ ಹೊರಡಿಸಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅ.21ರಂದು ನಡೆದ ಸಭೆಯ ನಡವಳಿಯನ್ನು ಜಾರಿಗೊಳಿಸಲು ಎಲ್ಲ ಅಪರ ಮುಖ್ಯ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ ಮೊದಲ ವರದಿ ಶಿಫಾರಸುಗಳನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಶಿಫಾರಸುಗಳ ಅನುಷ್ಠಾನ ಕುರಿತು ಸಭೆ ನಡೆಸಿ ರೂಪಿಸಲಾದ ನಡವಳಿಯನ್ನು ಅನುಷ್ಠಾನಗೊಳಿಸುವ ದೃಷ್ಟಿಯಿಂದ ಈ ಅನಧಿಕೃತ ಟಿಪ್ಪಣಿ ಹೊರಡಿಸಿದ್ದಾರೆ.

  • ಅಟಲ್ ಜೀ ಜನಸ್ನೇಹಿ ಕೇಂದ್ರಗಳು ಎಲ್ಲ ಸರ್ಕಾರಿ ನಾಗರಿಕ ಆನ್​ಲೈನ್ ಸೇವೆಗಳನ್ನು ಒದಗಿಸಬೇಕು. ಈ ಸಂಬಂಧ ತಗಲುವ ವೆಚ್ಚಕ್ಕೆ ಅರ್ಜಿದಾರರಿಂದ 25 ರೂ. ಶುಲ್ಕ ವಿಧಿಸಬೇಕು.
  • ಅಟಲ್ ಜೀ ಜನಸ್ನೇಹಿ ಕೇಂದ್ರ ನಾಗರಿಕ ಆನ್​ಲೈನ್ ಸೇವೆ ಕುರಿತು ಕಿರು ವೀಡಿಯೋ ತಯಾರಿಸಿ ಯೂಟ್ಯೂಬ್, ವಾಟ್ಸ್​ಆಪ್​ಗಳ ಮೂಲಕ ಸಾರ್ವಜನಿಕರಿಗೆ ಪ್ರಚುರಪಡಿಸಬೇಕು.
  • ಕಂದಾಯ ಇಲಾಖೆಯ ಎಲ್ಲ ಪ್ರಮಾಣಪತ್ರಗಳ ವಿತರಣೆಗಾಗಿ ಇ-ಕ್ಷಣ ವ್ಯವಸ್ಥೆ ಜಾರಿಗೊಳಿಸಿ ಕಡ್ಡಾಯವಾಗಿ ಬಳಕೆ ಮಾಡಬೇಕು.
  • ಅರ್ಜಿದಾರರು ಸೇವೆಗೆ ಸಂಬಂಧಿಸಿದಂತೆ ಸಲ್ಲಿಸುವ ದಾಖಲೆಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರಗಳ ತಂತ್ರಾಂಶದಲ್ಲಿ ಸಂಗ್ರಹಿಸಿಕೊಂಡು ನೀಡಲಾಗುವ ಪ್ರಮಾಣಪತ್ರವನ್ನು ಅರ್ಜಿದಾರನ ಡಿಜಿ ಲಾಕರ್​ಗೆ ಕಳುಹಿಸಬೇಕು. ಡಿಜಿ ಲಾಕರ್​ನಿಂದ ಪ್ರಮಾಣಪತ್ರ ಡೌನ್​ಲೋಡ್ ಮಾಡಿಕೊಳ್ಳುವ ಸಂದರ್ಭ ಶುಲ್ಕ ವಿಧಿಸಬೇಕು.
  • ಕಂದಾಯ ಇಲಾಖೆಯ ಎಲ್ಲ ಸೇವೆಗಳನ್ನು ಬಳಕೆದಾರರ ಮೊಬೈಲ್ ಆಪ್ ಮೂಲಕ ಲಭ್ಯವಾಗುವಂತೆ ಕ್ರಮ ವಹಿಸಬೇಕು.
  • ಸೇವೆಗೆ ಸಂಬಂಧಿಸಿದ ಪೂರಕ ದಾಖಲೆ ಅಧಿಕಾರಿಗಳು ಪಡೆದು ಸ್ಕಾಯನ್ ಮಾಡಿ ಮೊಬೈಲ್ ಆಪ್ ಮೂಲಕ ನೇರವಾಗಿ ಗ್ರಾಮ ಲೆಕ್ಕಾಧಿಕಾರಿಗೆ ಕಳುಹಿಸುವಂತೆ ವ್ಯವಸ್ಥೆ ಮಾಡಬೇಕು. ಈ ಕುರಿತು 30 ದಿನಗಳಲ್ಲಿ ಕ್ರಮ ವಹಿಸಬೇಕು.
  • ಆನ್​ಲೈನ್ ಮೂಲಕ ಸೇವೆಗಳು ಲಭ್ಯವಿರುವೆಡೆ ಕಂದಾಯ ಇಲಾಖೆಯ ಕಾಗದ ಪತ್ರಗಳ ದಾಖಲೆಗಳ ಭೌತಿಕ ಸಲ್ಲಿಕೆ ಹಾಗೂ ಸಮಾನಾಂರ ಕಾಗದ ಪತ್ರಗಳನ್ನೊಳಗೊಂಡ ಕಡತಗಳ ಚಲನವಲನವನ್ನು ಸ್ಥಗಿತಗೊಳಿಸಬೇಕು.
  • ಕಂದಾಯ ಮತ್ತು ಇತರ ಇಲಾಖೆಗಳ ಎಲ್ಲ ಪಿಂಚಣಿ ಯೋಜನೆಗಳನ್ನು 1 ತಿಂಗಳ ಒಳಗೆ ನವೋದಯ ಆಪ್ ಅಡಿ ತರಬೇಕು.
  • ನಾಗರಿಕರ ಎಲ್ಲ ಆನ್​ಲೈನ್ ಸೇವೆಗಳಿಗೆ ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಗೂಗಲ್ ಪೇ, ಫೋನ್ ಪೇ ಮೂಲಕ ಪಾವತಿಸಲು ಕ್ರಮ ಕೈಗೊಳ್ಳಬೇಕು.
  • ಆನ್​ಲೈನ್ ಬಳಕೆದಾರರಿಗೆ ವ್ಯಾಲೆಟ್ ವ್ಯವಸ್ಥೆ ಸೃಜಿಸಿ ಸೇವೆ ಒದಗಿಸಬೆಕು.
  • ಕಾವೇರಿ-2 ತಂತ್ರಾಂಶವನ್ನು 2 ತಿಂಗಳ ಒಳಗೆ ಅಭಿವೃದ್ಧಿಪಡಿಸಬೇಕು.
  • ಅರ್ಜಿದಾರರಿಗೆ ಅರ್ಜಿಯ ವಸ್ತುಸ್ಥಿತಿ, ಅನುಮೋದನೆ, ತಿಸ್ಕರಣೆ ಮತ್ತು ಅಗತ್ಯವಿರುವ ಹೆಚ್ಚುವರಿ ದಾಖಲೆಗಳ ಕುರಿತು ಎಸ್​ಎಂಎಸ್ ಸೌಲಭ್ಯ ಅಥವಾ ದೂರವಾಣಿ ಕರೆ ಸೌಲಭ್ಯ ಕಲ್ಪಿಸಬೇಕು.
  • ಮೊಬೈಲ್ ಆಪ್ ಅಥವಾ ಡಿಜಿ ಲಾಕರ್ ಮೂಲಕ ಪ್ರಮಾಣಪತ್ರ ಡೌನ್​ಲೋಡ್ ಮಾಡಿಕೊಳ್ಳಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಬೇಕು. ಪ್ರಮಾಣಪತ್ರದ ಸಾಫ್ಟ್ ಪ್ರತಿಯನ್ನು ಇ-ಮೇಲ್ ಮೂಲಕ ಪಿಡಿಎಫ್ ರೂಪದಲ್ಲಿ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಎಸ್​ಎಂಎಸ್ ಜೋಡಿಸಿ ಕಳುಹಿಸಬೇಕು.
  • ಜಾತಿ ಪ್ರಮಾಣಪತ್ರ/ಆದಾಯ ಪ್ರಮಾಣ ಪತ್ರಗಳಲ್ಲಿ ಹೆಸರು, ವಿಳಾಸದಲ್ಲಿ ಕಾಗುಣಿತ ದೋಷಗಳನ್ನು ತಿದ್ದುವ ಅಧಿಕಾರವನ್ನು ತಹಸೀಲ್ದಾರ್ ದರ್ಜೆ -2 ಅವರಿಗೆ ಪ್ರತ್ಯಾಯೋಜಿಸಬೇಕು.
  • ಭೂಮಿ ತಂತ್ರಾಂಶ ದಲ್ಲಿ ಸೂಕ್ತ ಮಾರ್ಪಾಡು ಮಾಡಬೇಕು.
  • ಆರ್​ಟಿಸಿಯಲ್ಲಿನ ದೋಷ ಸರಿಪಡಿಸಲು ಭೂಮಿ ತಂತ್ರಾಂಶವನ್ನು 30 ದಿನದೊಳಗೆ ನವೀಕರಿಸಬೇಕು.
  • ಭೂಮಿ ತಂತ್ರಾಂಶದಲ್ಲಿ ಏಕ ಮಾಲೀಕತ್ವದ ಪ್ರತ್ಯೇಕ ಆರ್​ಟಿಸಿ ಪಡೆಯಲು 30 ದಿನಗಳ ಒಳಗೆ ಸೂಕ್ತ ಬದಲಾವಣೆ ಮಾಡಬೇಕು.
  • ಭೂ ಸ್ವಾಧೀನ ನಿರ್ವಹಣಾ ತಂತ್ರಾಂಶ ವ್ಯವಸ್ಥೆ ಅಭಿವೃದ್ಧಿ ಪಡಿಸಬೇಕು.
  • ಡಿಸಿಗಳಿಗೆ ಭೂಮಿ ತಂತ್ರಾಂಶದಲ್ಲಿ ಲಾಗಿನ್ ಆಗಲು ಅವಕಾಶ ಕಲ್ಪಿಸಬೇಕು. ಕೃಷಿಯೇತರ ಭೂಮಿ ಪರಿವರ್ತನೆಯ ಎಲ್ಲ ಹಳೆಯ ಪ್ರಕರಣಗಳನ್ನು ಸಂಬಂಧಪಟ್ಟ ಆರ್​ಟಿಸಿಗಳಲ್ಲಿ ಕೃಷಿಯೇತರ ಎಂದು ಗುರುತುಮಾಡಲು ಕ್ರಮವಹಿಸಬೇಕು.
  • ಸ್ಥಳಗಳನ್ನು ಗುರುತಿಸಲು ಕೇಂದ್ರ ಸರ್ಕಾರ ನಿರ್ದಿಷ್ಟ ಪಡಿಸಿರುವಂತಹ ಕೇವಲ ಸ್ಥಳೀಯ ಸರ್ಕಾರಿ ಸಂಕೇತಗಳನ್ನು ಮಾತ್ರ ಕಡ್ಡಾಯವಾಗಿ ಬಳಕೆ ಮಾಡಬೇಕು.
  • ಎಸ್​ಎಸ್​ಎಲ್​ಸಿ ಪ್ರಮಾಣಪತ್ರ ಪಡೆಯುವಲ್ಲಿ ವಿಳಂಬ ತಪ್ಪಿಸಲು ಇ-ಆಡಳಿತ ಕೇಂದ್ರದಲ್ಲಿ ದೃಢೀಕರಣ ಶಾಖೆ ಪ್ರಾರಂಭಿಸಬೇಕು.
  • ಕಂದಾಯ ಇಲಾಖೆಗೆ ಪ್ರತ್ಯೇಕ ವೆಬ್​ಸೈಟ್ ತೆರೆಯಬೇಕು. ?ಡಿಸಿಗಳ ಹಂತದಲ್ಲಿ ಇ-ಕಚೇರಿಯನ್ನು ಕಡ್ಡಾಯವಾಗಿ ಉಪಯೋಗಿಸಬೇಕು. ? ವಾರಕ್ಕೊಂದು ದಿನ ಅಂದರೆ ಗುರುವಾರವನ್ನು ಕಂದಾಯ ದಿನವೆಂದು ಪದನಾಮಗೊಳಿಸಿ ಆ ದಿನ ಎಲ್ಲ ಅಧಿಕಾರಿ/ಸಿಬ್ಬಂದಿ ಕಚೇರಿಯಲ್ಲಿ ಹಾಜರಿದ್ದು, ಅಪರಾಹ್ನ ಕಂದಾಯ ನ್ಯಾಯಾಲಯಗಳನ್ನು ಕಡ್ಡಾಯವಾಗಿ ನಡೆಸಬೇಕು.
  • ಗ್ರಾಮ ಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರುಗಳಿಗೆ ಮೊಬೈಲ್ ಆಪ್ ಮೂಲಕ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಮಾಸಿಕ ಡೇಟಾ ದರ 200 ರೂ. ನೀಡಬೇಕು.
  • ಎಲ್ಲ ಗ್ರಾಮ ಲೆಕ್ಕಿಗರಿಗೆ ಡೆಸ್ಕ್ ಟಾಪ್ ಗಣಕಯಂತ್ರ ಹಾಗೂ ಸ್ಕಾಯನರ್ ಒದಗಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು.
  • ಗ್ರಾಮ ಲೆಕ್ಕಿಗರ ಹುದ್ದೆಯನ್ನು ಎಸ್​ಡಿಸಿ ಹುದ್ದೆಗಳೆಂದು ವೃಂದ ಬದಲಾವಣೆ ಮಾಡಬಹುದು. ಈ ಬಗ್ಗೆ ಸಿ ಆಂಡ್ ಆರ್ ಮಾರ್ಪಡಿಸಬೇಕು.
  • ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಭೂಮಿ ಬಹಳ ಮೌಲ್ಯಯತವಾಗಿದ್ದು, ಅವುಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಕಾನೂನು ರಕ್ಷಣೆಯಿಂದ ಉಳಿಸಲು ಪ್ರಸ್ತಾವನೆ ಸಲ್ಲಿಸಬೇಕು. ? ಬೆಳೆ ಸಮೀಕ್ಷೆ ಅಪ್ಲಿಕೇಷನ್​ನಲ್ಲಿ ಬೆಳೆಗಳ ವಿವರಗಳನ್ನು ಅನುಮೋದಿಸಿದಲ್ಲಿ ಅದನ್ನು ಸ್ವಯಂ ಚಾಲಿತವಾಗಿ ಆರ್​ಟಿಸಿ ಬೆಳೆ ಅಂಕಣದಲ್ಲಿ ಅಪ್​ಲೋಡ್ ಮಾಡಲು ಪರಿಶೀಲಿಸಬೇಕು.
  • ಭೂಮಿ, ಕೃಷಿ ಇಲಾಖೆ ಬೆಳೆ ಸಮೀಕ್ಷೆಆಪ್ ತಂತ್ರಾಂಶದಲ್ಲಿ ಬದಲಾವಣೆ ಬಗ್ಗೆ ಪರಿಶೀಲಿಸಬೇಕು.

ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

ಲಸಿಕೆ ಹಾಕುವವರ ಸೋಗಿನಲ್ಲಿ ಮನೆಗೆ ಬಂದು, ಪಿಸ್ತೂಲ್​ ತೋರಿಸಿ ಹೆದರಿಸಿ ದರೋಡೆ!

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags