ಕನ್ನಡ ಪ್ರಭ

1.2M Followers

ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಇಲ್ಲ; ಶಾಲೆಗಳನ್ನು ಮುಚ್ಚುವ ಗಂಭೀರ ಸ್ಥಿತಿ ಸದ್ಯಕ್ಕೆ ಇಲ್ಲ: ಸಿಎಂ ನೇತೃತ್ವದ ಸಂಪುಟ ಸಭೆ ತೀರ್ಮಾನ

09 Dec 2021.3:54 PM

ಬೆಂಗಳೂರು: ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಕುರಿತು ಜನರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸದ್ಯಕ್ಕೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವುದಿಲ್ಲ. ವಾರದ ಬಳಿಕ ಈ ಕುರಿತು ಪರಿಸ್ಥಿತಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ನೈಟ್ ಕರ್ಫ್ಯೂ ಸದ್ಯಕ್ಕಿಲ್ಲ, ಒಂದು ವಾರದ ಬಳಿಕ ನಿರ್ಧಾರ ಮಾಡಲಾಗುವುದು. ನರ್ಸಿಂಗ್ ವಿದ್ಯಾರ್ಥಿಗಳಿಗೆ ಎರಡು ಡೋಸ್ ಕಡ್ಡಾಯ. ಕ್ರಿಸ್ಮಸ್, ಹೊಸ ವರ್ಷಕ್ಕೆ ಒಂದು ವಾರ ನೋಡಿಕೊಂಡು ಕೆಲ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ವಿವರಿಸಿದರು.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಸುದರ್ಶನ್ ಅವರ ಜೊತೆ ಚರ್ಚೆ ಮಾಡಿದ್ದೇವೆ. ಓಮಿಕ್ರಾನ್ ಕುರಿತು ವಿವರಣೆ ನೀಡಿದ್ದಾರೆ. ಜನರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ. ಹಾಸ್ಟೆಲ್‌ಗಳಿಗೆ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದೇವೆ. ವಾರ್ಡನ್, ಅಡುಗೆಯವರಿಗೆ ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿರಬೇಕು. ವ್ಯಾಕ್ಸಿನ್ ಡ್ರೈವ್ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಗಡಿ ಭಾಗದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ಹಾಸ್ಟೆಲ್, ಕ್ಲಸ್ಟರ್ ಗೆ ಮಾತ್ರ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಯಾವುದೇ ಹೊಸ ಗೈಡ್‌ಲೈನ್ಸ್ ಇಲ್ಲ ಎಂದರು. ಸಚಿವ ಸಂಪುಟಗೆ ಆರೋಗ್ಯ ಸಚಿವ ಸುಧಾಕರ್ ಗೈರು ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸುಧಾಕರ್ ಸಭೆಗೆ ಬರಲು ಸಾಧ್ಯವಾಗದು ಎಂದು ಮೊದಲೇ ತಮಗೆ ತಿಳಿಸಿ ಅನುಮತಿ ಪಡೆದುಕೊಂಡಿದ್ದರು ಎಂದು ಸಮರ್ಥಿಸಿಕೊಂಡರು.

ಸಂಪುಟ ಸಭೆಯ ನಂತರ ಶಾಲೆಗಳ ಪರಿಸ್ಥಿತಿ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚುವುದಿಲ್ಲ, ಪರೀಕ್ಷೆಗಳು ಎಂದಿನಂತೆ ನಡೆಯುತ್ತಿದೆ. ಶಾಲೆಗಳಲ್ಲಿ ಹಿಂದಿನ ಮಾರ್ಗಸೂಚಿಯೇ ಮುಂದುವರಿಯಲಿದೆ. ಹೊಸದಾಗಿ ಜಾರಿಗೆ ತರುವುದಿಲ್ಲ. ವಸತಿ ಶಾಲೆಗಳು ಮತ್ತು ಹಾಸ್ಟೆಲ್ ಗಳಲ್ಲಿ ವಿಶೇಷ ಗಮನ ನೀಡುತ್ತೇವೆ ಎಂದರು.

ಕೋವಿಡ್ ಬಂದು ಮುಚ್ಚಿ ಹೋಗಿದ್ದ ಶಾಲೆಗಳು ಈಗ ಪುನರಾರಂಭವಾಗಿದೆ, ಮಕ್ಕಳು ಆಸಕ್ತಿಯಿಂದ ಶಾಲೆಗೆ ಬರುತ್ತಿದ್ದಾರೆ. ಕೋವಿಡ್ ತಜ್ಞರ ಸಮಿತಿ ಮುಖ್ಯಸ್ಥ ಡಾ. ಸುದರ್ಶನ್ ನೇತೃತ್ವದ ಸಮಿತಿ ಪೂರ್ಣವಾಗಿ ಅಧ್ಯಯನ ಮಾಡಿ ಇಂದು ಮುಖ್ಯಮಂತ್ರಿಗಳ ಸಚಿವ ಸಂಪುಟ ಮುಂದೆ ಶಾಲೆಗಳನ್ನು ಮುಚ್ಚುವ ಅಗತ್ಯವಿಲ್ಲ, ವಸತಿ ಶಾಲೆ ಮತ್ತು ಹಾಸ್ಟೆಲ್ ಗಳಲ್ಲಿ ತಪಾಸಣೆ ಹೆಚ್ಚಾಗಬೇಕು. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಿಂದ ಅಧಿಕಾರಿಯನ್ನೊಳಗೊಂಡ ಜಂಟಿ ಸಮಿತಿ ಮಾಡಿ ವಸತಿ ಶಾಲೆಗಳು, ಹಾಸ್ಟೆಲ್ ಗಳಿಗೆ ಹೋಗಿ ಆಗಾಗ ತಪಾಸಣೆ ಮಾಡುತ್ತಿರಬೇಕೆಂದು ಸಲಹೆ ನೀಡಿದ್ದಾರೆ ಎಂದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Prabha

#Hashtags