Kannada News Now

1.8M Followers

BIGG NEWS: 'ಆರೋಗ್ಯ ಇಲಾಖೆ ನೌಕರ'ರಿಗೆ ಬಿಗ್ ಶಾಕ್: ಇನ್ಮುಂದೆ 'ಹಾಜರಾತಿ ಆಧರಿಸಿ ವೇತನ ಪಾವತಿ ವ್ಯವಸ್ಥೆ' ಜಾರಿ

21 Apr 2022.4:02 PM

ಬೆಂಗಳೂರು : ಇಲಾಖೆಯಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಯೋಮೆಟ್ರಿಕ್‌ ಹಾಜರಾತಿ ಆಧರಿಸಿ ವೇತನ ಪಾವತಿಸುವ ವ್ಯವಸ್ಥೆ ಕಡ್ಡಾಯಗೊಳಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.

ಕೆ. ಸುಧಾಕರ್ ( Minister Dr K Sudhakar ) ಹೇಳಿದ್ದಾರೆ.

ಸೋಮವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆಸ್ಪತ್ರೆ, ಇಲಾಖೆ ಕಚೇರಿ ಮತ್ತು ಸಂಸ್ಥೆಗಳಲ್ಲಿ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದಿರುವ ಬಗ್ಗೆ ಸಾರ್ವಜನಿಕರು ಹಾಗೂ ಚುನಾಯಿತ ಪ್ರತಿನಿಧಿಗಳಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ನಿಜವಾದ ಕಾರಣಗಳಿಲ್ಲದೆ ಕೆಲಸ ಕದಿಯುವುದನ್ನು ಸಹಿಸಲು ಆಗುವುದಿಲ್ಲ. ಅವರ ಕರ್ತವ್ಯಲೋಪದಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗುತ್ತದೆ. ಹೀಗಾಗಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದ ಯಾರೇ ಆಗಲಿ ಅಂತಹವರ ವೇತನ ಕಡಿತಕ್ಕೆ ಸೂಚನೆ ನೀಡಲಾಗಿದೆ. ಇಲಾಖೆ ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗೂ ಅವರ 'ಆಧಾರ್‌ ' ಆಧರಿತ ಬಯೋಮೆಟ್ರಿಕ್‌ ಹಾಜರಾತಿ (ಎಇಬಿಎಎಸ್‌) ಕಡ್ಡಾಯಗೊಳಿಸಲಾಗಿದೆ. ಅದನ್ನು ಆಧರಿಸಿಯೇ ಇನ್ನು ಮುಂದೆ ವೇತನ ನೀಡುವಂತೆ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದರು.

ಕೋವಿಡ್‌ ಕಾರಣಕ್ಕೆ ಸ್ಥಗಿತಗೊಂಡಿದ್ದ ಬಯೋಮೆಟ್ರಿಕ್‌ ಹಾಜರಾತಿ ಪದ್ಧತಿಯನ್ನು ಕಳೆದ ಎರಡು ತಿಂಗಳ ಹಿಂದಿನಿಂದಲೇ ಮತ್ತೆ ಕಡ್ಡಾಯಗೊಳಿಸಲಾಗಿದೆ. ಅನೇಕ ಸಭೆಗಗಳಲ್ಲಿ ಮತ್ತು ಸುತ್ತೋಲೆ ಮೂಲಕವೂ ಈ ಬಗ್ಗೆ ಸೂಚನೆ ನೀಡಲಾಗಿದೆ. ಆದರೂ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹಾಜರಾತಿ ದಾಖಲಿಸದಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗ ಸ್ಪಷ್ಟ ಎಚ್ಚರಿಕೆ ಜತೆಗೆ ಅಧಿಕೃತ ಆದೇಶ ನೀಡಿದ್ದುಅಂತಹ ಪ್ರಕರಣಗಳನ್ನು ಗೈರು ಹಾಜರಿ ಎಂದು ಪರಿಗಣಿಸಿ ವೇತನ ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಡಿಡಿಒ ಹೊಣೆ : ಇಲಾಖೆಯ ಆಸ್ಪತ್ರೆ, ಸಂಸ್ಥೆ ಮತ್ತು ಕೇಂದ್ರಗಳ ಜವಾಬ್ದಾರಿ ನಿರ್ವಹಿಸುವ ಡಿಡಿಒ ( ಸ್ಯಾಲರಿ ಡ್ರಾಯಿಂಗ್‌ ಆಫೀಸರ್‌)ಗಳು ಪ್ರತೀ ತಿಂಗಳು ಎಇಬಿಎಎಸ್‌ ನಲ್ಲಿ ತಮ್ಮ ವ್ಯಾಪ್ತಿಯ ಎಲ್ಲ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿ ಅದರ ಅನುಸಾರವೇ ವೇತನ ಪಾವತಿಗೆ ವರದಿ ಸಿದ್ಧಪಡಿಸಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ (ಡಿಎಚ್‌ಒ) ಸಲ್ಲಿಸಬೇಕು.

ಅವರು ಅದನ್ನು ಪರಿಶೀಲಿಸಿ ವೇತನ ಬಿಡುಗಡೆ ಮತ್ತು ಕಡಿತಕ್ಕೆ ಸೂಚನೆ ನೀಡಲಿದ್ದಾರೆ. ಡಿಎಚ್‌ಒ ಅವರು ಕೈಗೊಂಡ ಕ್ರಮಗಳನ್ನ ಮೇಲಿನ ಹಂತದ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು

ಯಾರೇ ಆಗಲಿ ಶೇ.80ರಷ್ಟು ಹಾಜರಾತಿಗಿಂತ ಕಡಿಮೆ ಇದ್ದಲ್ಲಿ ಅವರ ವೇತನ ತಡೆ ಹಿಡಿಯಲಾಗುತ್ತದೆ. ನಂತರ ಮಾರ್ಗಸೂಚಿ ಅನ್ವಯ ಮುಂದಿನ ಕ್ರಮ ವಹಿಸಲಾಗುವುದು. ಒಂದು ವೇಳೆ ಶೇ.80ರಷ್ಟು ಹಾಜರಾತಿ ಇದ್ದಲ್ಲಿ ವೇತನ ಬಿಡುಗಡೆ ಮಾಡಿ ಉಳಿದ ಶೇ.20 ಹಾಜರಾತಿ ದಾಖಲು ಮಾಡದಿರುವುದಕ್ಕೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲಾಗುತ್ತದೆ. ಸಿಬ್ಬಂದಿ ನೀಡುವ ಕಾರಣ ನಿಜವಾಗಿದ್ದಲ್ಲಿ ಪ್ರಕರಣ ಮುಕ್ತಾಯಗೊಳಿಸಲಾಗುವುದು. ಒಂದು ವೇಳೆ ಸಬೂಬು ನೀಡಿದರೆ ಅಥವಾ ನೀಡಿರುವ ಮಾಹಿತಿ ಸುಳ್ಳು ಆಗಿದ್ದಲ್ಲಿ ಮುಂದಿನ ತಿಂಗಳ ವೇತನದಲ್ಲಿ ನಿರ್ದಿಷ್ಟಪಡಿಸಿರುವ ಮೊತ್ತವನ್ನುಕಡಿತಗೊಳಿಸಲಾಗುವುದು ಎಂದರು.

ಒಂದು ವೇಳೆ ಎಇಬಿಎಎಸ್‌ ಅನುಷ್ಟಾನಗೊಳಿಸದೆ, ಹಾಜರಾತಿ ಪರಿಶೀಲಿಸದೆ ವೇತನ ಪಾವತಿಸಿದರೆ ಆಯಾ ಡಿಡಿಒಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಇದನ್ನು ಸರಿಯಾಗಿ ಉಸ್ತುವಾರಿ ಮಾಡದಿದ್ದಲ್ಲಿ ಡಿಎಚ್‌ಒಗಳ ವಿರುದ್ಧವೂ ಕ್ರಮ ಕೈಗೊಳ್ಳಲು ವರದಿ ನೀಡುವಂತೆ ಜಿಲ್ಲೆಗಳ ಉಸ್ತುವಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಪ್ರತಿ ವಾರ ಪರಿಶೀಲನೆ

ಪ್ರತಿ ವಾರ ಇಲಾಖೆ ಪ್ರಗತಿ ಪರಿಶೀಲನೆಯಲ್ಲಿ ಉಳಿದ ಅಂಶಗಳ ಜತೆಗೆ ಹಾಜರಾತಿ ಕಡ್ಡಾಯ ಮತ್ತು ವೇತನಕ್ಕೆ ಸಂಯೋಜನೆಗೊಳಿಸಿರುವ ವ್ಯವಸ್ಥೆಯನ್ನು ಪರಾಮರ್ಶೆ ಮಾಡಲಾಗುತ್ತಿದೆ. ಅನುಷ್ಟಾನದಲ್ಲಿ ಲೋಪ ಕಂಡರೆ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂದರು.

ಆರೋಗ್ಯಸೌಧ ಸೇರಿದಂತೆ ಇಲಾಖೆ ವ್ಯಾಪ್ತಿಯ ಎಲ್ಲಾ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಸೇವಾ ಸಿಬ್ಬಂದಿ ಮತ್ತು ಕಚೇರಿ ಸಿಬ್ಬಂದಿಗಳು ಎಇಬಿಎಎಸ್‌ ನಲ್ಲಿ ದಿನಕ್ಕೆ ಮೂರು ಬಾರಿ ತಮ್ಮ ಹಾಜರಾತಿ ದಾಖಲಿಸಲು ಸೂಚಿಸಲಾಗಿದೆ. ಕಚೇರಿ, ಆಸ್ಪತ್ರೆಗಳಲ್ಲಿ ಪ್ರತ್ಯೇಕ ಸಮಯ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಇಲಾಖೆಯ ಹೊಣೆ ಹೊತ್ತಿರುವ ಆಯುಕ್ತ ರಂದೀಪ್‌ ಅವರೇ ಬಯೋಮೆಟ್ರಿಕ್‌ ಹಾಜರಾತಿ ನೋಂದಯಿಸಿ ಅನುಸರಿಸುವ ಮೂಲಕ ಉಳಿದ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾದರಿಯಾಗಿದ್ದಾರೆ ಎಂದೂ ಸಚಿವ ಸುಧಾಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಜರಾತಿ ದಾಖಲು ವೇಳಾಪಟ್ಟಿ

1. ಆಡಳಿತ ಕಚೇರಿಗಳು : ಬೆಳಗ್ಗೆ - 10 ; ಮಧ್ಯಾಹ್ನ- 1 ; ಸಂಜೆ - 5.30
2. ಆಸ್ಪತ್ರೆಗಳು : ಬೆಳಗ್ಗೆ - 9 ; ಮಧ್ಯಾಹ್ನ - 1 ; ಸಂಜೆ - 4.30 (ಸಾರ್ವತ್ರಿಕ ರಜಾ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಮಾತ್ರ)
3. ಆಸ್ಪತ್ರೆಗಳಲ್ಲಿ ಪಾಳಿಯಲ್ಲಿ ಕೆಲಸ ಮಾಡುವವರು : 1ನೇ ಪಾಳಿ - ಬೆಳಗ್ಗೆ-8 ; ಬೆಳಗ್ಗೆ- 11, ಮಧ್ಯಾಹ್ನ - 2 ; 2ನೇ ಪಾಳಿ - ಮಧ್ಯಾಹ್ನ - 2 ; ಸಂಜೆ - 5 ; ರಾತ್ರಿ - 8 ; 3ನೇ ಪಾಳಿ - ರಾತ್ರಿ - 8 ; ಮಧ್ಯ ರಾತ್ರಿ 12 ; ಮರುದಿನ ಬೆಳಗ್ಗೆ- 8 ; (ತಾಂತ್ರಿಕ ಅಡಚಣೆ ಇರುವ ಕಡೆ ಮಧ್ಯ ರಾತ್ರಿ 12ಕ್ಕೆ ಬೇಡ, ಸಮಸ್ಯೆ ಬಗೆಹರಿದ ಬಳಿಕ ಕಡ್ಡಾಯ)
4. ವಿಶೇಷ ಸಂದರ್ಭಗಳಲ್ಲಿ (ಅಪಘಾತ, ತುರ್ತು ಸೇವೆ, ಆಪರೇಷನ್‌) ಕರ್ತವ್ಯ ನಿರತ ವೈದ್ಯರು, ಶುಶ್ರೂಷಕ ಸಿಬ್ಬಂದಿ ಮೂರು ಬಾರಿ ಹಾಜರಾತಿ ಹಾಕಲು ಸಾಧ್ಯವಾಗದಿದ್ದಲ್ಲಿ ಸದರಿ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕರು ಅಥವಾ ಆಡಳಿತ ವೈದ್ಯಾಧಿಕಾರಿಗಳು ಖಾತರಿಪಡಿಸಿಕೊಂಡು ಆ ದಿವಸಗಳಲ್ಲಿ ವಿನಾಯಿತಿ ನೀಡಬಹುದು. ಆದರೆ ಕನಿಷ್ಟ ಎರಡು ಬಾರಿ (ಆಗಮನ ಮತ್ತು ನಿರ್ಗಮನ) ಹಾಜರಾತಿ ದಾಖಲಿಸಲೇಬೇಕು.

ಇಲಾಖೆಯಲ್ಲಿ ಇರುವ ಒಟ್ಟು ಸಂಸ್ಥೆಗಳು : 3230

ಒಟ್ಟು ಅಧಿಕಾರಿ ಮತ್ತು ಸಿಬ್ಬಂದಿ : 65318


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags