Kannada News Now

1.8M Followers

BIG NEWS: 86ನೇ 'ಕನ್ನಡ ಸಾಹಿತ್ಯ ಸಮ್ಮೇಳನ'ಕ್ಕೆ ಡೇಟ್ ಫಿಕ್ಸ್: ಹಾವೇರಿಯಲ್ಲಿ ಸೆ.23 ರಿಂದ ಮೂರು ದಿನ 'ಕನ್ನಡ ಡಿಂಢಿಮ'

23 Apr 2022.7:59 PM

ಬೆಂಗಳೂರು : ಹಾವೇರಿಯಲ್ಲಿ ಸೆಪ್ಟೆಂಬರ್ 23, 24 ಹಾಗೂ 25 ರಂದು ಮೂರು ದಿನಗಳ ಕಾಲ 86 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ( Kannada Sahithya Sammelana ) ಆಯೋಜಿಸಲು ತೀರ್ಮಾನಿಸಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಅರ್ಥಪೂರ್ಣ ಗೋಷ್ಠಿ ಆಯೋಜಿಸಿ

ಗೋಷ್ಠಿಗಳಲ್ಲಿ ಹೆಚ್ಚಿನ ಜನ ಭಾಗವಹಿಸುವಂತಾಗಬೇಕು ಹಾಗೂ ಅವು ಅರ್ಥಪೂರ್ಣವಾಗಿರಬೇಕು. ಸಮಿತಿಗಳಲ್ಲಿ ಸಕ್ರಿಯವಾಗಿರುವ ಸ್ಥಳೀಯ ಜನರನ್ನು ತೊಡಗಿಸಿಕೊಳ್ಳಬೇಕು. ಗೋಷ್ಠಿಗಳಲ್ಲಿಯೂ ಸ್ಥಳೀಯರಿಗೆ ಅವಕಾಶ ನೀಡಬೇಕು. ಎಲ್ಲಾ ತಾಲ್ಲೂಕುಗಳ ಸ್ವಯಂಸೇವಕರು ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಸೂಕ್ತ ವಸತಿ ವ್ಯವಸ್ಥೆ

ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ವಸತಿ ವ್ಯವಸ್ಥೆಯಾಗಬೇಕು. ಎಲ್ಲಿ, ಎಷ್ಟು ಜನರಿಗೆ ವಸತಿ ವ್ಯವಸ್ಥೆಯಾಗಿದೆ ಎಂಬ ಬಗ್ಗೆ ನಿಖರವಾಗಿ ಯೋಚಿಸಿ. ಹಾಸ್ಟೆಲ್ ಗಳು ಮತ್ತು ಡಾರ್ಮಿಟರಿಗಳನ್ನು ವಸತಿ ಶಾಲೆಗಳನ್ನು ಸದುಪಯೋಗಿಸಿಕೊಳ್ಳಬೇಕು. ಪ್ರಮುಖ ಕಲ್ಯಾಣ ಮಂಟಪಗಳನ್ನು ಗುರುತಿಸಿ ಎಂದು ಸಿಎಂ ಸೂಚಿಸಿದರು. ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿಯೂ ವಸತಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಮಾರ್ಗ ಮಧ್ಯೆಯೂ ಉತ್ತಮ ಹೋಟೆಲ್ ಗಳಿವೆ, ಖಾಸಗಿ ಶಾಲೆಗಳನ್ನು ಸಹ ಬಳಕೆ ಮಾಡಿಕೊಳ್ಳಬಹುದು ಎಂದು ಸೂಚಿಸಿದರು. ತುರ್ತು ಪರಿಸ್ಥಿತಿಗಳಲ್ಲಿ ಬಳಕೆ ಮಾಡಲು ಕುಂಭಮೇಳದಲ್ಲಿ ಆಯೋಜಿಸಿದಂತೆ ಟೆಂಟ್ ಗಳನ್ನು ಉಪಯೋಗಿಸಬಹುದು. ಇವುಗಳ ಬಗ್ಗೆ ಸೂಕ್ತ ನೀಲನಕ್ಷೆ ಸಿದ್ಧಪಡಿಸಲು ತಿಳಿಸಿದರು.

ಊಟ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯ ಬಗ್ಗೆಯೂ ಸೂಕ್ತ ಯೋಜನೆಗಳನ್ನು ರೂಪಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಸಿದ್ಧತೆಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಸಭೆ ಕರೆದು, ಅಂತಿಮಗೊಳಿಸುವುದು. ಬಜೆಟ್ ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.

ಪರಿಸರ ಸ್ನೇಹಿ ಸಮ್ಮೇಳನ

ಸಮ್ಮೇಳನವನ್ನು ಪರಿಸರಸ್ನೇಹಿಯಾಗಿಸಲು ಫ್ಲೆಕ್ಸ್ ಗಳ ಬಳಕೆಯನ್ನು ನಿಷೇಧಿಸಿ ಜಾಹೀರಾತು ಫಲಕಗಳನ್ನು ಬಳಸುವಂತೆ ಮುಖ್ಯ ಮಂತ್ರಿಗಳು ಸೂಚಿಸಿದರು.

ಸಭೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಚಂದ್ರಶೇಖರ್ ಕಂಬಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಅರುಣ್ ಕುಮಾರ್ ಪೂಜಾರ್, ನೆಹರು ಒಲೆಕಾರ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ಹಾವೇರಿ ಜಿಲ್ಲಾಧಿಕಾರಿ ಡಾ. ಸಂಜಯ ಶೆಟ್ಟೆಣ್ಣವರ್ ಮೊದಲಾದವರು ಉಪಸ್ಥಿತರಿದ್ದರು.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now