ಪ್ರಜಾವಾಣಿ

1.5M Followers

ಅಧಿಕ ಅಂಕ ಗಳಿಸಿದ ಮೀಸಲಾತಿ ಅಭ್ಯರ್ಥಿ ಸಾಮಾನ್ಯ ವರ್ಗದಡಿ ಪರಿಗಣನೆ: 'ಸುಪ್ರೀಂ'

29 Apr 2022.06:25 AM

ನವದೆಹಲಿ: ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಕೊನೆಯ ಅಭ್ಯರ್ಥಿ ಪಡೆದದ್ದಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಮೀಸಲಾತಿ ಇರುವ ಅಭ್ಯರ್ಥಿಯನ್ನು 'ಸಾಮಾನ್ಯ ವರ್ಗ'ದಡಿ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್‌ ಗುರುವಾರ ಹೇಳಿದೆ.

'ಮೀಸಲಾತಿ ಇರುವ ವರ್ಗಗಳ ಅಭ್ಯರ್ಥಿಗಳು ಅರ್ಹತೆ ಹಾಗೂ ತಾವು ಪಡೆದ ಸ್ಥಾನದ ಕಾರಣಗಳಿಂದಾಗಿ ಮೀಸಲಾತಿ ಇಲ್ಲದ ಹುದ್ದೆಗಳಿಗೆ ಆಯ್ಕೆಯಾಗುವಂತಿದ್ದರೆ, ಆ ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲಿನ ಹುದ್ದೆಗಳನ್ನೇ ಆಯ್ಕೆ ಮಾಡಿಕೊಳ್ಳಬಹುದು' ಎಂದು ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಹಾಗೂ ಬಿ.ವಿ.ನಾಗರತ್ನಾ ಅವರಿದ್ದ ನ್ಯಾಯಪೀಠ ತಿಳಿಸಿದೆ.

1992ರ ಇಂದಿರಾ ಸಾಹ್ನಿ ಪ್ರಕರಣದಿಂದ ಹಿಡಿದು ಸೌರವ್ ಯಾದವ್ (2021) ಹಾಗೂ ಸಾಧನಾಸಿಂಗ್ ಡಾಂಗಿ ಪ್ರಕರಣದವರೆಗೆ (2022) ಪಾಲಿಸಲಾದ ನಿಯಮಗಳನ್ನೇ ನ್ಯಾಯಪೀಠವು ಈ ಪ್ರಕರಣಕ್ಕೂ ಅನ್ವಯಿಸಿತು.

ರಾಜಸ್ಥಾನದಲ್ಲಿ ಬಿಎಸ್‌ಎನ್‌ಎಲ್‌ನಲ್ಲಿ ತಾಂತ್ರಿಕ ಸಹಾಯಕ ಹುದ್ದೆಗೆ ನಡೆದ ನೇಮಕಾತಿಯಲ್ಲಿ ಮೀಸಲಾತಿಯ ಇಬ್ಬರು ಅಭ್ಯರ್ಥಿಗಳು ಸಾಮಾನ್ಯ ವರ್ಗದವರ ಪೈಕಿ ಕೊನೆಯ ಅಭ್ಯರ್ಥಿಗಿಂತ ಹೆಚ್ಚು ಅಂಕ ಗಳಿಸಿದ್ದರೂ ಅವರನ್ನು ಒಬಿಸಿ ವರ್ಗದಡಿ ಪರಿಗಣಿಸಲಾಗಿತ್ತು. ಈ ವಿಷಯ ಕೋರ್ಟ್‌ ಮೆಟ್ಟಿಲೇರಿತ್ತು.

ವಿಚಾರಣೆ ನಡೆಸಿದ್ದ ಹೈಕೋರ್ಟ್, ಈ ಒಬಿಸಿ ಅಭ್ಯರ್ಥಿಯನ್ನು ತಾಂತ್ರಿಕ ಸಹಾಯಕ ಹುದ್ದೆಗೆ ಪರಿಗಣಿಸುವಂತೆ ನಿರ್ದೇಶನ ನೀಡಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಬಿಎಸ್‌ಎನ್‌ಎಲ್‌ ಅರ್ಜಿ ಸಲ್ಲಿಸಿತ್ತು. ನ್ಯಾಯಪೀಠವು ಬಿಎಸ್‌ಎನ್‌ಎಲ್‌ನ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani

#Hashtags