ವಿಜಯವಾಣಿ

505k Followers

ಎಸ್ಸೆಸ್ಸೆಲ್ಸಿ-ಪಿಯುಸಿ ನಂತರ ಮುಂದೇನು? ಒತ್ತಡ ಹೇರಬೇಡಿ, ಅವರಿಚ್ಛೆಯ ಕೋರ್ಸ್​ಗೆ ಸೇರಿಸಿ.

01 Jun 2022.07:02 AM

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಹೊರಬೀಳುತ್ತಿದ್ದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳಲ್ಲಿ ಮುಂದೇನು ಎಂಬ ಬೃಹದಾಕಾರದ ಪ್ರಶ್ನೆ ಉದ್ಬವಿಸುತ್ತದೆ. ಯಥೇಚ್ಛವಾಗಿರುವ ಅವಕಾಶಗಳ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಮೂಡುತ್ತದೆ.

ಮಕ್ಕಳ ಭವಿಷ್ಯಕ್ಕೆ ಯಾವುದು ಉತ್ತಮ ಎನ್ನುವುದರ ಕುರಿತು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ 24/7 ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಂ. ಗಣಾಚಾರಿ, ಇಲಾಖೆಯ ಜಂಟಿ ನಿರ್ದೇಶಕ (ಶೈಕ್ಷಣಿಕ) ಎನ್.ರಾಜು, ತಾಂತ್ರಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಡಾ.ವೈ.ಎನ್.ದೊಡ್ಡಮನಿ ಅವರು ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆಗಳನ್ನು ಕೊಟ್ಟಿದ್ದಾರೆ.

ಎಲ್ಲದಕ್ಕೂ ಒಳ್ಳೆ ಸ್ಕೋಪ್…
ಆರ್ಟ್ಸ್, ಕಾಮರ್ಸ್, ಸೈನ್ಸ್ ಎಲ್ಲಾ ವಿಷಯಗಳು ಸರಿಸಮಾನ. ಪ್ರತಿಯೊಂದಕ್ಕೂ ಅದರದೇ ಆದ ಮೌಲ್ಯವಿದೆ. ಆರ್ಟ್ಸ್ ತೆಗೆದುಕೊಂಡರೆ ಕೆಲವರು ಆಡಿಕೊಳ್ಳುತ್ತಾರೆ. ಅಯ್ಯೋ ಆರ್ಟ್ಸ್​ಗೆ ಸ್ಕೋಪ್ ಇಲ್ಲ, ಅದನ್ಯಾಕೆ ತೆಗೆದುಕೊಂಡ್ರಿ ಎನ್ನುತ್ತಾರೆ. ಅಂತಹವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಆರ್ಟ್ಸ್ ತೆಗೆದುಕೊಂಡವರಿಗೂ ವಿಪುಲ ಅವಕಾಶಗಳಿವೆ. ಪಿಯುಸಿ ಆರ್ಟ್ಸ್ ತೆಗೆದುಕೊಂಡವರು ಬಿ.ಎ, ಬಿ.ಇಡಿ, ಎಂಎ ಮಾಡಿ ಶಿಕ್ಷಕರು ಅಥವಾ ಉಪನ್ಯಾಸಕರು ಆಗಬಹುದು. ಪತ್ರಿಕೋದ್ಯಮ ಮಾಡಿದರೆ ಪತ್ರಕರ್ತರಾಗಬಹುದು. ಬಿಎ ಓದುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡರೆ ಭವಿಷ್ಯದಲ್ಲಿ ಕೆಎಎಸ್ ಮತ್ತು ಐಎಎಸ್ ಅಧಿಕಾರಿಗಳಾಗಬಹುದಾದ ಅವಕಾಶಗಳಿವೆ.

ಮಕ್ಕಳ ಮೇಲೆ ಒತ್ತಡ ಹೇರಬೇಡಿ…
ಕೆಲ ಪಾಲಕರು ತಮ್ಮ ಜೀವನದಲ್ಲಿ ಸಾಧಿಸಲಾಗದ್ದನ್ನು ಬಲವಂತವಾಗಿ ತಮ್ಮ ಮಕ್ಕಳ ಮೇಲೆ ಹೇರುತ್ತಾರೆ. ಉದಾಹರಣೆಗೆ ತಂದೆಯೊಬ್ಬರಿಗೆ ಡಾಕ್ಟರ್ ಅಥವಾ ಇಂಜಿಯರ್ ಆಗಬೇಕು ಎಂಬ ಕನಸು ಇರುತ್ತದೆ. ಅದನ್ನು ಈಡೇರಿಸಿಕೊಳ್ಳಲು ಆಗಿರುವುದಿಲ್ಲ. ಅದನ್ನು ಮಕ್ಕಳ ಮೂಲಕ ಸಾಕಾರಗೊಳಿಸಲು ಮುಂದಾಗಿ ಮಕ್ಕಳ ಆಸೆ ಆಕಾಂಕ್ಷೆಗಳಿಗೆ ಅವಕಾಶ ನೀಡದೆ ಒತ್ತಡ ಹೇರುತ್ತಾರೆ. ಇದರಿಂದ ಇಷ್ಟವಿಲ್ಲದಿರುವ ವಿಷಯವನ್ನು ಕೊಡಿಸಿ, ಅವರು ಫೇಲ್ ಆಗುವಂತೆ ಮಾಡಿ ಅವರ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ.

ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಂ. ಗಣಾಚಾರಿ

ಮೊದಲೇ ವೃತ್ತಿ ಆಯ್ಕೆ ಮಾಡಿಕೊಳ್ಳಿ
ಸಾಮಾನ್ಯವಾಗಿ ಮೊದಲು ಕೋರ್ಸ್ ಆಯ್ಕೆ, ನಂತರ ವೃತ್ತಿ ಆಯ್ಕೆ ಎಂಬುದು ಎಲ್ಲರ ಯೋಚನೆ. ಹೀಗಾಗಿಯೇ ಬಹುತೇಕ ವಿದ್ಯಾರ್ಥಿಗಳು ಪದವಿ, ಪಿಜಿ ಮುಗಿದ ನಂತರವೂ ವೃತ್ತಿ ಆಯ್ಕೆಯ ಗೊಂದಲದಲ್ಲಿರುತ್ತಾರೆ. ಆದ್ದರಿಂದ, ಮೊದಲು ವೃತ್ತಿ ಆಯ್ಕೆ, ನಂತರ ಕೋರ್ಸ್ ಆಯ್ಕೆ ಎಂದುಕೊಂಡು ಪಾಲಿಸುವುದು ಸೂಕ್ತವಾಗಿದೆ. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳು ತಮ್ಮ ಕನಸನ್ನು ಬೇಗ ನನಸು ಮಾಡಿಕೊಳ್ಳಬಹುದಾಗಿದೆ. ದ್ವಿತೀಯ ಪಿಯುಸಿ ಮುಗಿದ ನಂತರವಾದರೂ ತಮ್ಮ ಇಷ್ಟದ ವೃತ್ತಿಗೆ ಸಂಬಂಧಿಸಿದ ಕೋರ್ಸ್​ಗಳನ್ನು ಆಯ್ಕೆ ಮಾಡಿದರೆ ಬೇಗ ಯಶಸ್ಸನ್ನು ಕಾಣಬಹುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಗಣಾಚಾರಿ ವಿವರಿಸಿದ್ದಾರೆ.

ಕಲಾಸಕ್ತರಿಗೂ ವಿಪುಲ ಅವಕಾಶ
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಆರ್ಟ್ಸ್, ಸೈನ್ಸ್, ಕಾಮರ್ಸ್, ಡಿಪ್ಲೊಮ, ಐಟಿಐ ಹೀಗೆ ಬಹಳಷ್ಟು ಅವಕಾಶಗಳಿವೆ. ಓದಿನಲ್ಲಿ ಆಸಕ್ತಿ ಇಲ್ಲದವರು, ಯಾವುದಾದರೊಂದು ಕಲೆಯಲ್ಲಿ ವಿಶೇಷತೆ ಹೊಂದಿರುತ್ತಾರೆ. ಅಂತಹವರಿಗೂ ವಿಪುಲ ಅವಕಾಶಗಳಿವೆ. ಎಸ್ಸೆಸ್ಸೆಲ್ಸಿ ಪಾಸ್ ಆದ ನಂತರ ಚಿತ್ರಕಲೆ, ಕ್ರೀಡೆ, ನೃತ್ಯ, ಸಂಗೀತ ಹೀಗೆ ತಮ್ಮ ಆಸಕ್ತಿಗೆ ಅನುಗುಣವಾಗಿ ಡಿಪ್ಲೊಮಾ ಕೋರ್ಸ್​ಗಳಿವೆ. ಚಿತ್ರಕಲೆಯಲ್ಲಿ ಆಸಕ್ತಿ ಇರುವವರು ಫ್ಯಾಷನ್ ಡಿನೈನಿಂಗ್ ಕೋರ್ಸ್ ಮಾಡಬಹುದು. ಸಿನಿಮಾ ಮಾಧ್ಯಮದಲ್ಲೂ ಉತ್ತಮ ಅವಕಾಶ ಹೊಂದಬಹುದಾಗಿದೆ.

ಡಿಪ್ಲೊಮಾ ಮುಗಿಸಿ ಬಿಇಗೆ ಪ್ರವೇಶ
ಡಿಪ್ಲೊಮಾ ಕೋರ್ಸ್ ಮುಗಿಸಿ ನೇರವಾಗಿ ಇಂಜಿನಿಯರಿಂಗ್ (ಬಿಇ) ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಬಹುದು. ಈ ಮೂಲಕ 6 ವರ್ಷಗಳಲ್ಲಿ ಡಿಪ್ಲೊಮಾ ಹಾಗೂ ಬಿಇ ಎರಡನ್ನೂ ಮುಗಿಸಬಹುದು. ಇಂಜಿನಿಯರಿಂಗ್ ಮಾಡಿದರೆ ಆಯಾ ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಪಡೆಯಬಹುದು. ಸಾಕಷ್ಟು ಖಾಸಗಿ ಕಂಪನಿಗಳು ವಿದ್ಯಾರ್ಥಿಗಳನ್ನು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುತ್ತಿವೆ. ಪ್ರಸ್ತುತ ಸಾಫ್ಟ್​ವೇರ್ ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಪದವಿ ಪಡೆದವರಿಗೆ ಹೆಚ್ಚಿನ ಬೇಡಿಕೆಗಳಿವೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ (ದಾಖಲಾತಿ ವಿಭಾಗ) ಸಹಾಯಕ ನಿರ್ದೇಶಕ ಡಾ.ವೈ.ಎನ್ ದೊಡ್ಡಮನಿ ವಿವರಿಸಿದರು.

ಕನ್ನಡದಲ್ಲೂ ಡಿಪ್ಲೊಮಾ ಪರೀಕ್ಷೆ
ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಜತೆಗೆ ಕನ್ನಡವನ್ನು ಬಳಸಲು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಉದಾಹರಣೆಗೆ: ಎಲೆಕ್ಟ್ರಾನಿಕ್ಸ್, ಇಂಡಿಕೇಟ್, ರಿಯಾಕ್ಷನ್ ಎಂಬಿತ್ಯಾದಿ ಇಂಗ್ಲಿಷ್ ಅಕ್ಷರಗಳನ್ನು ಕನ್ನಡದಲ್ಲಿ ಬರೆದರೆ ಅದನ್ನು ಮೌಲ್ಯಮಾಪಕರು ಪರಿಗಣಿಸಿ ಸಮನಾದ ಅಂಕಗಳನ್ನು ನೀಡಲಿದ್ದಾರೆ. ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ 22-23ನೇ ಸಾಲಿನ ಡಿಪ್ಲೊಮಾ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.

  • ಆದಾಯ ಪ್ರಮಾಣ ಪತ್ರ ಇದ್ದರೆ 960 ರೂ. ಹಾಗೂ ಇಲ್ಲದಿದ್ದರೆ 4270 ರೂ. ಕಟ್ಟಬೇಕು
  • ರಾಜ್ಯಾದ್ಯಂತ 99 ಸರ್ಕಾರಿ ಡಿಪ್ಲೊಮಾ ಕಾಲೇಜುಗಳಿವೆ
  • ಈ ವರ್ಷ 10 ಡಿಪ್ಲೊಮಾ ಕಾಲೇಜುಗಳ ಆರಂಭಕ್ಕೆ ಅನುಮತಿ ದೊರೆತಿದೆ.
  • ಇಂಜಿನಿಯರಿಂಗ್ ವಿಭಾಗದಲ್ಲಿ 30 ಕೋರ್ಸ್​ಗಳಿವೆ, ನಾನ್ ಇಂಜಿನಿಯರಿಂಗ್​ನಲ್ಲಿ 4 ಕೋರ್ಸ್
  • ವೈದ್ಯರಾಗಬೇಕೆಂಬ ಕನಸು ಹೊಂದಿರುವವರು ಮುಂದೆ ನೀಟ್ ಪರೀಕ್ಷೆ ಎದುರಿಸಿ ಎಂಬಿಬಿಎಸ್ ಓದಬೇಕು. ಅಲ್ಲದೆ, ಬಿಡಿಎಸ್, ಹೋಮಿಯೋಪಥಿ, ಯೋಗ, ಮೆಡಿಸಿನ್​ಗೆ ಸಂಬಂಧಿಸಿದ ಸಾಕಷ್ಟು ಕೋರ್ಸ್​ಗಳು ಇವೆ.
  • ಸಿಬಿಝೆಡ್​ನಲ್ಲಿ ಪದವಿ ಪಡೆದ ಬಳಿಕ ವೆಟರ್ನರಿ, ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ಅವಕಾಶಗಳಿವೆ. ಸಿಬಿಝೆಡ್ ವಿಭಾಗದಲ್ಲಿ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಷಯಗಳಿರುತ್ತದೆ. ಸಿಬಿಝೆಡ್ ತೆಗೆದುಕೊಂಡು ಬಿ.ಇಡಿ ಮಾಡಿದರೆ ಶಿಕ್ಷಕರಾಗಬಹುದು.
  • ಇತ್ತೀಚೆಗೆ ಕಾಮರ್ಸ್​ಗೂ ಹೆಚ್ಚಿನ ಬೇಡಿಕೆಯಿದೆ. 3 ವರ್ಷದ ಡಿಪ್ಲೊಮಾ ಕೋರ್ಸ್​ಗೆ ಈಗಾಗಲೇ ನೇಮಕಾತಿ ಆರಂಭವಾಗಿದೆ. ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಸೇರಿ ಹಲವು ವಿಭಾಗದಲ್ಲಿ ಕಲಿಯಲು ಅವಕಾಶಗಳಿವೆ. ಮುಂದೆ ಕೆಲಸಕ್ಕೆ ಹೋಗಬಹುದು ಅಥವಾ ಶಿಕ್ಷಣ ಮುಂದುವರಿಸಲೂ ಅವಕಾಶವಿದೆ.
  • ಪಿಯುಸಿಯಲ್ಲಿ ಪಿಸಿಎಂಸಿ ಓದಿದವರು ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ) ತೆಗೆದುಕೊಂಡರೆ ಉತ್ತಮ. ಇದರಲ್ಲಿ ಎಂಸಿಎ ಮಾಡಲು ಅವಕಾಶಗಳಿವೆ. ಕಾಮರ್ಸ್ ವಿಷಯದಲ್ಲಿ ಕಂಪ್ಯೂಟರ್ ಉಪಯೋಗಿಸಿ ಚಾರ್ಟೆಡ್ ಅಕೌಂಟ್ ವ್ಯಾಸಂಗ ಮಾಡಿದರೂ ಹೆಚ್ಚಿನ ಬೇಡಿಕೆಯಿದೆ.
  • ಕಲಾ ವಿಭಾಗದಲ್ಲಿ ಓದಿದವರು ಆಸಕ್ತಿ ಇರುವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ. ಬಿಎ ವ್ಯಾಸಂಗ ಮಾಡುವುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಬರೆಯಬಹುದು. ಬಿಎ ಮಾಡಿ ಬಿ.ಇಡಿ ಮಾಡಿದರೆ ಶಿಕ್ಷಕರಾಗಬಹುದು.
  • ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ ಸುಲಭವಾಗಿ ಇಂಜಿನಿಯರಿಂಗ್ ಸೀಟು ಸಿಗುತ್ತದೆ. ಇಂಜಿನಿಯರಿಂಗ್​ನಲ್ಲಿ 30ಕ್ಕೂ ಅಧಿಕ ಕೋರ್ಸ್ ಗಳು ಇವೆ. ಇದಲ್ಲದೇ, ಪಿಯುಸಿ ಮುಗಿಸಿದವರು 2ನೇ ವರ್ಷದ ಡಿಪ್ಲೊಮಾಗೆ ಹೋಗಲು ಅವಕಾಶಗಳಿವೆ.
  • ದ್ವಿತೀಯ ಪಿಯು ಮುಗಿಸಿದ ನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್​ಡಿಎ) ಪರೀಕ್ಷೆ ಬರೆದು ಉದ್ಯೋಗ ಪಡೆಯಬಹುದು.
    ಇ ಆಯಂಡ್​ ​ಸಿ ವಿಭಾಗದಲ್ಲಿ ಡಿಪ್ಲೊಮ ಮಾಡಿದವರಿಗೆ ಸರ್ಕಾರದ ಅಧೀನದ ಬೆಸ್ಕಾಂ ಸೇರಿ ಇನ್ನಿತರ ವಿಭಾಗದಲ್ಲಿ ಜೂನಿಯರ್ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್ ಹಾಗೂ ಖಾಸಗಿ ಕಂಪನಿಗಳಲ್ಲೂ ಹೇರಳವಾದ ಅವಕಾಶಗಳಿವೆ.
  • ಪಿಯುಸಿ ಕಾಮರ್ಸ್ ವಿಷಯದಲ್ಲಿ ವಿಪುಲ ಅವಕಾಶಗಳಿವೆ. ಬಿಕಾಂ., ಬಿಬಿಎಂ, ಬಿಬಿಎ, ಬಿಸಿಎಸ್ ಪದವಿ ಮಾಡಬಹುದು. ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು. ಹೆಚ್ಚಿನ ಶ್ರಮವಹಿಸಿದರೆ ಸಿಎ ಮಾಡಬಹುದು.
  • ಗಣಿತದಲ್ಲಿ ಆಸಕ್ತಿ ಇರುವವರು ಅದರಲ್ಲೇ ಸಂಶೋಧನೆಯನ್ನೂ ಮಾಡಬಹುದು. ಭಾರತೀಯ ವಿಜ್ಞಾನ ಸಂಸ್ಥೆ, ಟಾಟಾ ಇನ್​ಸ್ಟಿಟ್ಯೂಟ್, ಐಐಟಿ, ಚೆನ್ನೈನ ರಾಮಾನುಜ ಇನ್​ಸ್ಟಿಟ್ಯೂಟ್​ನಲ್ಲಿ ಎಂಎಸ್​ಸಿ ಇಂಟಿಗ್ರೇಟ್ ಕೋರ್ಸ್ ಮಾಡಬಹುದು.
  • ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಫೇಲ್ ಆದ ಕೂಡಲೇ ಆತಂಕ ಪಡುವ ಅಗತ್ಯವಿಲ್ಲ. ಇನ್ನೂ ಸಮಯ ಇದೆ. ಪೂರಕ ಪರೀಕ್ಷೆಯಲ್ಲಿ ಬರೆಯುವ ಅವಕಾಶ ಇದೆ. ಹಾಗಾಗಿ ಯೋಚನೆ ಬಿಟ್ಟು ಈಗಿನಿಂದಲೇ ಅಭ್ಯಾಸ ಮಾಡಿದರೆ ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆದು ತರಗತಿಗೆ ಹೋಗಬಹುದು.
  • ಪ್ಯಾರಾಮೆಡಿಕಲ್ ಮಾಡಲು ವಿಜ್ಞಾನ ವಿಷಯದಲ್ಲಿ ಕಲಿತರೆ ಒಳ್ಳೆಯದು. ಇಲ್ಲವೆ ಡಿಪ್ಲೊಮಾ ಸಹ ಮಾಡಬಹುದು. ಕಾಮರ್ಸ್ ತೆಗೆದುಕೊಂಡು ಪ್ಯಾರಾಮೆಡಿಕಲ್ ಮಾಡುವುದು ಸೂಕ್ತವಲ್ಲ. ವಿಜ್ಞಾನ ತೆಗೆದುಕೊಳ್ಳುವುದು ಒಳ್ಳೆಯದು. ಇಲ್ಲವೇ ಕಾಮರ್ಸ್ ನಲ್ಲಿ ಬಿ.ಕಾಂ. ಬಿಬಿಎ, ಸಿಎ ಮಾಡಬಹುದು.

ಬಯೋಟೆಕ್ನಾಲಜಿಯಲ್ಲಿ ಪರಿಹಾರ
ಸದ್ಯ ರಾಸಾಯನಿಕ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಕಲುಷಿತಗೊಂಡಿದೆ. ಹಾಗಾಗಿ ಇದಕ್ಕೆ ಭವಿಷ್ಯದಲ್ಲಿ ಬಯೋಟೆಕ್ನಾಲಜಿ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬಯೋಟೆಕ್ನಾಲಜಿಯಲ್ಲಿ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆಗೆ ಅವಕಾಶವಿದೆ. ರೈತರು ಸಾವಯವ ಕೃಷಿ ಬೆಳೆಯಲು ಪ್ರೋತ್ಸಾಹಿಸುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಂಧನದ ಸಮಸ್ಯೆ ಇದುರಾಗಲಿದೆ. ಆಗ ಅನಿಲದ ಬದಲಿಗೆ ಗೋಬರ್ ಗ್ಯಾಸ್ ಬಳಕೆಯ ಅಗತ್ಯ ಎದುರಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಪ್ಲಾಸ್ಟಿಕ್ ನಿಮೂಲನೆಗೂ ಇದರ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿದೆ. ಹಾಗಾಗಿ ಭವಿಷ್ಯದ ಸಮಸ್ಯೆಗಳಿಗೆ ಬಯೋಟೆಕ್ನಾಲಜಿ ಪರಿಹಾರ ಒದಗಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ (ಶೈಕ್ಷಣಿಕ) ಎನ್. ರಾಜು ಮಾಹಿತಿ ನೀಡಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ (ಶೈಕ್ಷಣಿಕ) ಎನ್.ರಾಜು

ಎಜುಕೇಷನ್ ಲೋನ್ ಸಿಗುತ್ತದೆ
ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ವಿದ್ಯಾರ್ಥಿಗಳು ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ಪಡೆದು ಉನ್ನತ ಶಿಕ್ಷಣವನ್ನು ಪಡೆಯಬಹುದು. ಉದ್ಯೋಗ ಸಿಕ್ಕಿದ ನಂತರ ಅದನ್ನು ವಿದ್ಯಾರ್ಥಿಗಳೇ ತೀರಿಸಬಹುದಾಗಿದೆ. ಈ ಬಗ್ಗೆ ಮನೆ ಸಮೀಪವಿರುವ ಬ್ಯಾಂಕ್​ಗಳಿಗೆ ತೆರಳಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ವಿದೇಶದಲ್ಲೂ ಕೆಲಸ
ಈ ವರ್ಷದಿಂದ ಪ್ರಾಯೋಗಿಕವಾಗಿ ಡಿಪ್ಲೊಮಾದಲ್ಲಿ ಸೈಬರ್ ಸೆಕ್ಯುರಿಟಿ ಮತ್ತು ಟೂರಿಸಂ ಕೋರ್ಸ್​ಗಳನ್ನು ಆರಂಭಿಸಲಾಗುತ್ತಿದೆ. ವಿದೇಶದಲ್ಲೂ 1 ವರ್ಷದ ತರಬೇತಿ ನೀಡಲಾಗುತ್ತಿದ್ದು, ಅಲ್ಲೂ ಕೂಡ ಉದ್ಯೋಗ ಮಾಡಲು ಅವಕಾಶ ಸಿಗಲಿದೆ.

50 ಸಾವಿರ ರೂ. ಸ್ಕಾಲರ್​ಶಿಪ್
ಡಿಪ್ಲೊಮಾ ಕೋರ್ಸ್​ಗೆ ಅತ್ಯಂತ ಕಡಿಮೆ ಪ್ರವೇಶ ಶುಲ್ಕ ಇದೆ. ಅಲ್ಲದೆ, 50 ಸಾವಿರ ರೂ.ವರೆಗೂ ವಿದ್ಯಾರ್ಥಿ ವೇತನ ಸಿಗಲಿದೆ.

https://www.vijayavani.net/?p=1283449

ರಾಜ್ಯಕ್ಕೆ ಆಗಮಿಸಿದ ಮುಂಗಾರು: ಜೂನ್‌ನಲ್ಲಿ ಮಳೆ ಕುಂಠಿತ ಸಾಧ್ಯತೆ

ಮೊದಲ ಪ್ರಯತ್ನದಲ್ಲೇ UPSCಯಲ್ಲಿ 31ನೇ ರ‍್ಯಾಂಕ್ ಪಡೆದ ಕನ್ನಡಿಗ! ಸಾಧನೆ ಬಗ್ಗೆ ಅವಿನಾಶ್​ ಹೇಳಿದ್ದಿಷ್ಟು…

9ನೇ ತರಗತಿಯ ಪರಿಷ್ಕೃತ ಪಠ್ಯದಿಂದ ನನ್ನ ಕವಿತೆಯನ್ನು ಕೈಬಿಡಿ: ರೂಪಾ ಹಾಸನ

ಡಿಪ್ಲೊಮಾ ಮುಗಿಸಿ ಬಿಇಗೆ ಪ್ರವೇಶ
ಡಿಪ್ಲೊಮಾ ಕೋರ್ಸ್ ಮುಗಿಸಿ ನೇರವಾಗಿ ಇಂಜಿನಿಯರಿಂಗ್ (ಬಿಇ) ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಬಹುದು. ಈ ಮೂಲಕ 6 ವರ್ಷಗಳಲ್ಲಿ ಡಿಪ್ಲೊಮಾ ಹಾಗೂ ಬಿಇ ಎರಡನ್ನೂ ಮುಗಿಸಬಹುದು. ಇಂಜಿನಿಯರಿಂಗ್ ಮಾಡಿದರೆ ಆಯಾ ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಪಡೆಯಬಹುದು. ಸಾಕಷ್ಟು ಖಾಸಗಿ ಕಂಪನಿಗಳು ವಿದ್ಯಾರ್ಥಿಗಳನ್ನು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುತ್ತಿವೆ. ಪ್ರಸ್ತುತ ಸಾಫ್ಟ್​ವೇರ್ ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಪದವಿ ಪಡೆದವರಿಗೆ ಹೆಚ್ಚಿನ ಬೇಡಿಕೆಗಳಿವೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ (ದಾಖಲಾತಿ ವಿಭಾಗ) ಸಹಾಯಕ ನಿರ್ದೇಶಕ ಡಾ.ವೈ.ಎನ್ ದೊಡ್ಡಮನಿ ವಿವರಿಸಿದರು.

https://www.vijayavani.net/?p=1283449

ರಾಜ್ಯಕ್ಕೆ ಆಗಮಿಸಿದ ಮುಂಗಾರು: ಜೂನ್‌ನಲ್ಲಿ ಮಳೆ ಕುಂಠಿತ ಸಾಧ್ಯತೆ

9ನೇ ತರಗತಿಯ ಪರಿಷ್ಕೃತ ಪಠ್ಯದಿಂದ ನನ್ನ ಕವಿತೆಯನ್ನು ಕೈಬಿಡಿ: ರೂಪಾ ಹಾಸನ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags