ವಿಜಯವಾಣಿ

506k Followers

ಸೊರಗಿದ ಕಲಿಕಾ ಚೇತರಿಕೆ ಕಾರ್ಯಕ್ರಮ; ಬೋಧನಾ ಸಾಮಗ್ರಿಗಳಿಲ್ಲದೆ ಶಿಕ್ಷಕರ ಪರದಾಟ

30 Jun 2022.3:26 PM

ಬೆಂಗಳೂರು ಗ್ರಾಮಾಂತರ: ಶಾಲೆಗಳು ಪುನರಾರಂಭ ಗೊಂಡು ಅರ್ಧವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿವೆ. ಆದರೂ ಮಕ್ಕಳಿಗೆ ಸಮವಸ ಕೊಟ್ಟಿಲ್ಲ. ಪುಸ್ತಕಗಳನ್ನು ಮುದ್ರಿಸಿಲ್ಲ ಎಂಬ ಆರೋಪ ಪ್ರತಿ ವರ್ಷ ಕೇಳಿಬರುವುದು ಸಾಮಾನ್ಯ. ಟೆಂಡರ್ ಪ್ರಕ್ರಿಯೆ ತಡವಾಯಿತು, ಟೆಂಡರ್‌ದಾರರೇ ತಡಮಾಡುತ್ತಿದ್ದಾರೆ ಎಂಬ ಸಬೂಬುಗಳು ಸಾಮಾನ್ಯವೇ.

ಇದರ ಸಾಲಿಗೆ ಸರ್ಕಾರದ ವಿನೂತನ ಯೋಜನೆ ಕಲಿಕಾ ಚೇತರಿಕೆಯೂ ಸೇರ್ಪಡೆಯಾಗುತ್ತಿದೆ.

ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಶಾಲೆಗಳಿಂದ ದೂರವಾದ ಮಕ್ಕಳ ಕಲಿಕೆಯ ಅಂತರವನ್ನು ಸರಿದೂಗಿಸಲು ಸರ್ಕಾರ 'ಕಲಿಕಾ ಚೇತರಿಕೆ'ಎಂಬ ವಿನೂತನ ಪ್ರಯೋಗಕ್ಕೆ ಮುಂದಾ ಯಿತು. ಈ ಹಿನ್ನೆಲೆಯಲ್ಲಿ 1ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಮೇ 16ರಿಂದಲೇ ತರಗತಿಗಳನ್ನು ಪುನರಾರಂಭಿಸಿ ಆಗಸ್ಟ್‌ವರೆಗೆ ಈ ಕಾರ್ಯಕ್ರಮದಡಿ ವಿಶೇಷ ಕಲಿಕೆಗೆ ಒಳಪಡಿಸಲಾಯಿತು. ಆದರೆ ಇದಕ್ಕೆ ಪೂರಕವಾದ ಬೋಧನಾ ಸಾಮಗ್ರಿ ಪೂರೈಸುವಲ್ಲಿ ಸರ್ಕಾರ ಎಡವಿದೆ. ಇದರಿಂದಾಗಿ ಗ್ರಾಮಾಂತರ ಜಿಲ್ಲೆಯ ಶಿಕ್ಷಕರು ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕೆ ತಡಕಾಡುವಂತಾಗಿದೆ.

ಆನ್‌ಲೈನ್ ತರಗತಿಗಳಿಂದ ಸಮರ್ಪಕ ಶಿಕ್ಷಣ ಪಡೆಯದೆ ವಂಚಿತರಾದ ಸರ್ಕಾರಿ ಶಾಲಾ ಮಕ್ಕಳಲ್ಲಿನ ಕಲಿಕೆಯಲ್ಲಿ ಚೇತರಿಕೆ ತರಲು ಸರ್ಕಾರ ಈ ವಿಶೇಷ ಕಾರ್ಯಕ್ರಮ ರೂಪಿಸಿತ್ತು. ತರಗತಿ ಆರಂಭಕ್ಕೆ ಆಸಕ್ತಿ ತೋರಿಸಿದ ಸರ್ಕಾರ ಇದಕ್ಕೆ ಪೂರಕವಾದ ಸಾಮಗ್ರಿಗಳನ್ನು ಪೂರೈಸಲು ನಿರ್ಲಕ್ಷ್ಯ ತೋರಿತು. ಇದರ ಪರಿಣಾಮ ಈ ವಿನೂತನ ಕಾರ್ಯಕ್ರಮವೇ ಹಳ್ಳ ಹಿಡಿದಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಮತ್ತೆ ಆನ್‌ಲೈನ್ ಗುಮ್ಮ: ಸತತ ಎರಡು ವರ್ಷ ಮೊಬೈಲ್‌ಗಳ ಮೂಲಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹೈರಾಣಾಗಿದ್ದರು. ಇದರಿಂದ ಹೊರತರಲು ಈ ಯೋಜನೆ ರೂಪಿಸಿದರೂ ಬೋಧನಾ ಸಾಮಗ್ರಿ ಕೊರತೆಯಿಂದ ಅನಿವಾರ್ಯವಾಗಿ ಮತ್ತೆ ಆನ್‌ಲೈನ್ ಮೂಲಕವೇ ಕಲಿಕಾ ಚೇತರಿಕೆ ಮೂಡಿಸುವ ಕಸರತ್ತು ನಡೆಸಲಾಗಿದೆ. ವಿದ್ಯಾರ್ಥಿಗಳು ಅಭ್ಯಾಸ ಮಾಡಿದ ಹಿಂದಿನ ವರ್ಷದ ವಿಷಯಗಳ ಹಾಳೆಯನ್ನು ವಾಟ್ಸ್‌ಆಯಪ್ ಮೂಲಕ ಮಕ್ಕಳಿಗೆ ಕಳಿಸಲಾಗುತ್ತಿದೆ. ನೂರಾರು ಪುಟಗಳಿರುವ ಪಿಡಿಎಗಳನ್ನು ಪ್ರಿಂಟ್‌ಔಟ್ ತೆಗೆದುಕೊಳ್ಳುವುದು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ದುಬಾರಿಯಾಗಿ ಪರಿಣಮಿಸಿದೆ. ಮತ್ತೆ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಪಿಡಿಎಗಳನ್ನು ವೀಕ್ಷಿಸುವುದು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಕಲಿಕಾ ಹಾಳೆಗಳಿಲ್ಲದೆ ಪರದಾಟ: ಈ ಯೋಜನೆಯಡಿ ರೂಪಿಸಿದ ಬೋಧನಾ ಸಾಮಗ್ರಿಗಳ ಪೈಕಿ ಕಲಿಕಾ ಹಾಳೆಗಳು ಪ್ರಮುಖವಾಗಿವೆ. ಶಾಲೆಗಳು ಪುನರಾರಂಭಗೊಂಡು 1 ತಿಂಗಳು ಕಳೆದರೂ ಶಾಲೆಗಳಿಗೆ ಕಲಿಕಾ ಹಾಳೆಗಳು ತಲುಪಿಲ್ಲ. ಜೂನ್ ಅಂತ್ಯದಿಂದ ಪೂರೈಕೆಯಾಗುತ್ತಿದ್ದು, ಪ್ರಸ್ತುತ ಒಂದೂವರೆ ತಿಂಗಳು ಕಳೆದಿದೆ. ಉಳಿದ ಒಂದು ತಿಂಗಳಲ್ಲಿ ಕಾರ್ಯಕ್ರಮದ ಉದ್ದೇಶವನ್ನು ಸಾಕಾರಗೊಳಿಸುವುದು ಕಷ್ಟಸಾಧ್ಯ ಎಂಬ ಮಾತು ಶಿಕ್ಷಕರ ವಲಯದಿಂದ ಕೇಳಿಬಂದಿದೆ.

ಜಿಲ್ಲೆ ಅಷ್ಟೇ ಅಲ್ಲದೆ ಇತರ ಜಿಲ್ಲೆಗಳಲ್ಲೂ ಈ ಸಮಸ್ಯೆ ಇದೆ. ಟೆಂಡರ್ ಮತ್ತಿತರ ಪ್ರಕ್ರಿಯೆಯಿಂದ ತಡವಾಗಿದೆ. ಶೀಘ್ರದಲ್ಲೇ ಕಲಿಕಾ ಹಾಳೆಗಳು ತಲುಪಲಿವೆ. ಈಗಾಗಲೇ ಕೆಲವು ಶಾಲೆಗಳಿಗೆ ಬಂದಿವೆ. ಕಲಿಕಾ ಹಾಳೆಗಳನ್ನು ಪಿಡಿಎ ಮೂಲಕ ಶಾಲೆಗಳಿಗೆ ಕಳುಹಿಸಲಾಗಿದ್ದು, ಪ್ರಿಂಟ್‌ಔಟ್ ಅಥವಾ ಜೆರಾಕ್ಸ್ ಗಾಗಿ ಶಿಕ್ಷಕರು ಖರ್ಚು ಮಾಡಿದ ಹಣವನ್ನು ಶೀಘ್ರವೇ ಮರಳಿಸಲಾಗುವುದು.
- ಎಲ್. ಶ್ರೀಕಂಠ, ಡಿಡಿಪಿಐ

ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ಈ ವರ್ಷದಿಂದಾದರೂ ದೂರವಾಗುತ್ತಾರೆ ಎಂಬ ಆಸೆ ಇತ್ತು. ಆದರೆ ಸರ್ಕಾರದ ಹೊಸ ಕಾರ್ಯಕ್ರಮದ ಎಡವಟ್ಟಿನಿಂದ ಮತ್ತೆ ಮಕ್ಕಳು ಮೊಬೈಲ್‌ಗೆ ಅಂಟಿಕೊಳ್ಳುವಂತಾಗಿದೆ. ಕಾರ್ಯಕ್ರಮ ರೂಪಿಸುವವರು ಅದಕ್ಕೆ ಪೂರಕವಾದ ವಸ್ತುಗಳನ್ನು ಪೂರೈಸಲು ಕಾಳಜಿ ತೋರಬೇಕು.
- ಶಾಂತಮ್ಮ, ಪಾಲಕರು

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani